ವಡೋದರಾ: ವಡೋದರಾದ ಬಿ.ಸಿ.ಎ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ನಾಯಕಿ ಜೆಮಿಮಾ ರೋಡ್ರಿಗಸ್ 57 ರನ್ (37 ಎಸೆತ), ಲಾರಾ ವೊಲ್ವಾರ್ಡ್ಟ್ 44 ರನ್ (25 ಎಸೆತ) ಹಾಗೂ ಚಿನೆಲ್ ಹೆನ್ರಿ ಅಜೇಯ 35 ರನ್ (15 ಎಸೆತ) ಗಳಿಸಿದರು.
204 ರನ್‌ಗಳ ಗುರಿಯನ್ನು ಬೆನ್ನಟ್ಟಿದ RCB ತಂಡಕ್ಕೆ ನಾಯಕಿ ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವೋಲ್ ಭರ್ಜರಿ ಆರಂಭ ನೀಡಿದರು. ಸ್ಮೃತಿ ಮಂಧಾನ 41 ಎಸೆತಗಳಲ್ಲಿ 87 ರನ್ ಗಳಿಸಿ ತಂಡದ ಗೆಲುವಿಗೆ ಅಡಿಪಾಯ ಹಾಕಿದರು. ಜಾರ್ಜಿಯಾ ವೋಲ್ 54 ಎಸೆತಗಳಲ್ಲಿ 79 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು.

ಪಂದ್ಯದ ಕೊನೆಯ ಓವರ್‌ನಲ್ಲಿ ಗೆಲುವಿಗೆ 10 ರನ್ ಅಗತ್ಯವಿದ್ದಾಗ, ರಾಧಾ ಯಾದವ್ ಸತತ ಎರಡು ಬೌಂಡರಿ ಬಾರಿಸುವ ಮೂಲಕ 19.4 ಓವರ್‌ಗಳಲ್ಲಿ RCB ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ RCB ತಂಡ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ RCB ತಂಡವು 2024ರ ಬಳಿಕ 2026ರಲ್ಲಿ ಮತ್ತೆ WPL ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಸ್ಮೃತಿ ಮಂಧಾನ ಅವರು WPL ಇತಿಹಾಸದಲ್ಲಿ 1000 ರನ್ ಪೂರೈಸಿದ ಐದನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ ನಾಲ್ಕನೇ ಬಾರಿ ಫೈನಲ್ ತಲುಪಿದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು.
ಚಾಂಪಿಯನ್ ಪಟ್ಟಕ್ಕೇರಿದ RCB ಮಹಿಳಾ ತಂಡಕ್ಕೆ ₹6 ಕೋಟಿ ರೂ. ಬಹುಮಾನ ಮೊತ್ತ ಲಭಿಸ ಬಹುದು
“ಈ ಸಲ ಕಪ್ ನಮ್ದೇ” ಎಂಬ ಘೋಷವಾಕ್ಯವನ್ನು RCB ಮಹಿಳಾ ತಂಡ ಮತ್ತೊಮ್ಮೆ ನಿಜಪಡಿಸಿದೆ.










