ತೀರ್ಥಹಳ್ಳಿ : ನಾಲೂರು ಸಮೀಪ ಭೀಕರ ಅಪಘಾತ – ಮಹಿಳೆ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

ತೀರ್ಥಹಳ್ಳಿ ತಾಲ್ಲೂಕಿನ ನಾಲೂರು ಸಮೀಪ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.


ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಶಬರಿ ಹೋಟೆಲ್ ಮಾಲೀಕ ಸುದರ್ಶನ್ ಅವರು ಕುಟುಂಬ ಸಮೇತ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಸಂಬಂಧಿಕರ ಮನೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಟೋದಲ್ಲಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗುವ ವೇಳೆ ನಾಲೂರು ಸಮೀಪದ ತಿರುವಿನಲ್ಲಿ ಆಟೋ ಚಾಲಕನ ಅಜಾಗರೂಕ ಚಾಲನೆಯಿಂದ ವಾಹನ ಕಬ್ಬಿಣದ ಡಿವೈಡರ್‌ (ತಡೆಗೋಡೆ)ಗೆ ಡಿಕ್ಕಿ ಹೊಡೆದಿದೆ.


ಈ ಅಪಘಾತದಲ್ಲಿ ಆಟೋದ ಬಲಭಾಗದಲ್ಲಿ ಕುಳಿತಿದ್ದ ನಿಶ್ಮಿತಾ ಶೆಟ್ಟಿ (27) ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಸುದರ್ಶನ್ (ಮೂವತ್ತು ಐದು) ಹಾಗೂ ಅವರ ಪುತ್ರ ಸಂಚಿತ್ (7) ಗಾಯಗೊಂಡಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.


ಈ ಸಂಬಂಧ ಕುರುವಳ್ಳಿ ಗ್ರಾಮದ ಯಲ್ಲಪ್ಪ ಎಂಬ ಆಟೋ ಚಾಲಕನ ವಿರುದ್ಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.

Leave a Comment