ಹೊಸನಗರ:ಐದು ಜಲಾಶಯಗಳ ನಿರ್ಮಾಣದಿಂದ ಭೌಗೋಳಿಕ ಅಸ್ತಿತ್ವ ಕಳೆದುಕೊಂಡು ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕೆಂಬ ಕೂಗು ಮತ್ತೆ ಗಟ್ಟಿಯಾಗುತ್ತಿದೆ. ಈ ಸಂಬಂಧ ಹೋರಾಟದ ಮುಂದಿನ ಹಂತವಾಗಿ ಫೆಬ್ರವರಿ 12 ರಂದು ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ ಬೃಹತ್ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹೊಸನಗರ ತಾಲೂಕು ಈ ಹಿಂದೆ ಸ್ವತಂತ್ರ ವಿಧಾನಸಭಾ ಕ್ಷೇತ್ರವಾಗಿತ್ತು. ಆದರೆ ಪ್ರಸ್ತುತ ತಾಲೂಕಿನ ತಲಾ ಎರಡು ಹೋಬಳಿಗಳನ್ನು ಸಾಗರ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಹಂಚಲಾಗಿದೆ. ಇದರಿಂದ ತಾಲೂಕಿನ ಸಮಗ್ರ ಅಭಿವೃದ್ಧಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಈ ಅನ್ಯಾಯದ ವಿರುದ್ಧ ಹೊಸನಗರದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ಸಾವಿರಾರು ಜನರನ್ನು ಸೇರಿಸಿಕೊಂಡು ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು.
ಈ ಹೋರಾಟವು ಮೂಲೆಗದ್ದೆ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ರೂಪುಗೊಳ್ಳಲಿದೆ ಎಂದು ಅವರು ಹೇಳಿದರು.
ಪಕ್ಷಾತೀತ ಬೆಂಬಲ

ಹೊಸನಗರ ಕ್ಷೇತ್ರ ಮರುಸ್ಥಾಪನೆ ಹೋರಾಟಕ್ಕೆ ರಾಜಕೀಯ ಭೇದಭಾವವಿಲ್ಲದೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಈ ಹಿಂದೆಯೇ ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರು ಕೂಡ ಕ್ಷೇತ್ರ ಮರುಸ್ಥಾಪನೆಗೆ ಧ್ವನಿ ಎತ್ತಿದ್ದರು.
ಇದಲ್ಲದೆ, ಇತ್ತೀಚೆಗೆ ನಗರ ಗ್ರಾಮ ಪಂಚಾಯತಿ ಸದಸ್ಯ ಕರುಣಾಕರ ಶೆಟ್ಟಿ ಅವರು 30 ಪಂಚಾಯತಿಗಳನ್ನು ಒಳಗೊಂಡ ಸೈಕಲ್ ಜಾಥಾ ನಡೆಸಿ ಜನಜಾಗೃತಿ ಮೂಡಿಸಿರುವುದು ಹೋರಾಟಕ್ಕೆ ಮತ್ತಷ್ಟು ಶಕ್ತಿ ನೀಡಿದೆ.
ಫೆ.12ರ ಸಭೆ
ಹೋರಾಟದ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸುವ ಉದ್ದೇಶದಿಂದ ಫೆಬ್ರವರಿ 12, ಗುರುವಾರ ಬೆಳಿಗ್ಗೆ 10:30ಕ್ಕೆ ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.

ಎಲ್ಲರಿಗೂ ಆಹ್ವಾನ
“ಇದು ರಾಜಕೀಯ ಸಭೆಯಲ್ಲ, ಇದು ತಾಲೂಕಿನ ಸ್ವಾಭಿಮಾನ ಮತ್ತು ಅಸ್ತಿತ್ವದ ಹೋರಾಟ. ತಾಲೂಕಿನ ಎಲ್ಲಾ ಸಂಘ-ಸಂಸ್ಥೆಗಳು, ರೈತ ಸಂಘಗಳು, ದಲಿತ ಸಂಘಟನೆಗಳು, ಮಹಿಳಾ ಮಂಡಳಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಬೇಕು” ಎಂದು ಕಲಗೋಡು ರತ್ನಾಕರ್ ಮನವಿ ಮಾಡಿದ್ದಾರೆ.









