ಹೊಸನಗರ, ಫೆಬ್ರವರಿ.12: ಮುಳುಗಡೆ ಸಂತ್ರಸ್ಥ ಹೊಸನಗರ ತಾಲೂಕಿನ ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಯೇ ಸೂಕ್ತ ಮಾರ್ಗ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ನಡೆದ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರ ರಚನೆಯಿಂದ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಲಿದ್ದು ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ಸಿಗಲಿದೆ ಎಂದರು. ಹೋರಾಟವು ನಿಸ್ವಾರ್ಥ ಹಾಗೂ ಪಕ್ಷಾತೀತವಾಗಿರಬೇಕು. ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟವನ್ನು ಗಟ್ಟಿಗೊಳಿಸಬೇಕು. ಯುವಜನತೆ, ಸಮಾಜಸೇವಕರು ಹಾಗೂ ಭಾಗದ ಪ್ರಮುಖರು ಒಂದಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಭೌಗೋಳಿಕತೆ ಆಧಾರವಾಗಿ ಕೆಲವು ರಾಜ್ಯಗಳಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಪ್ರತ್ಯೇಕ ಕ್ಷೇತ್ರಗಳನ್ನು ರಚಿಸಲಾಗಿದೆ. ಮುಳುಗಡೆ ಸಮಸ್ಯೆಯಿಂದ ಬಳಲುತ್ತಿರುವ ಹೊಸನಗರದ ಹಿನ್ನಲೆಯಲ್ಲಿ ವಿಧಾನಸಭಾ ಕ್ಷೇತ್ರ ಪುನರ್ರಚನೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಹೊಸನಗರಕ್ಕೆ ಪ್ರತ್ಯೇಕ ಕ್ಷೇತ್ರ ಅಗತ್ಯವಾಗಿದೆ. ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ತಾಂತ್ರಿಕ ಹಾಗೂ ಕಾನೂನಾತ್ಮಕ ಅಂಶಗಳನ್ನು ಸರಿಯಾಗಿ ಗಮನಿಸಿ ಹೋರಾಟ ಮುಂದುವರಿಸಿದರೆ ಅದರ ಪರಿಣಾಮಕಾರಿತ್ವ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಡಾ. ಜಿ.ಡಿ. ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಸೇರಿದಂತೆ ಹಲವರು ಕ್ಷೇತ್ರ ರಚನೆಯ ಮಹತ್ವವನ್ನು ವಿವರಿಸಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದರು. ಶಾಸಕ ಆರಗ ಜ್ಞಾನೇಂದ್ರ ಮತ್ತು ಬೇಳೂರು ಗೋಪಾಲಕೃಷ್ಣ ಸಭೆಗೆ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.









